Wednesday, 9 October 2013

ಹಳ್ಳಿಗೊಂದು ಕಾನೂನು ದಿಲ್ಲಿಗೊಂದು ಕಾನೂನು ಯಾಕೆ?ರಾಜ್ಯಾದ್ಯಂತ ಧಿಗ್ಬ್ರಮೆ ಹುಟ್ಟಿಸಿದ ಸೌಜನ್ಯಾಳ ಸಾವಿಗೆ ಒಂದು ವರ್ಷ. 

ವರ್ಷವಾದರೂ ಪ್ರಕರಣದ ತನಿಖೆ ಸರಿಯಾಗಿ ನಡೆಯದೆ ಇರುವುದರಿಂದ ಜನರಲ್ಲಿ 
ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಪೋಲಿಸರ ಸಂಪೂರ್ಣ ವೈಫಲ್ಯಕ್ಕೆ ಈ ಪ್ರಕರಣ ಕೈಗನ್ನಡಿಯಾಗಿದೆ.

2012 ರ ಅ. 9 ರಂದು ಸಂಜೆ. ಕಾಲೇಜಿನಿಂದ ಮನೆಗೆ ಹೊರಟ ಧರ್ಮಸ್ಥಳದ ಪಾಂಗಾಳ ಮನೆ ಚಂದಪ್ಪ ಗೌಡ ಕುಸುಮಾವತಿ ದಂಪತಿ ಪುತ್ರಿ ಸೌಜನ್ಯಾ (17) ಮನೆಗೆ ಹೋಗಲೇ ಇಲ್ಲ. ಮನೆಗೆ ಬರದ ಪುತ್ರಿಯನ್ನು ಮನೆಯವರು ರಾತ್ರಿಯಿಡೀ ಹುಡುಕಿದರೂ ಸಿಗಲಿಲ್ಲ.

ಮರುದಿನ ಬೆಳಿಗ್ಗೆಯೂ ಹುಡುಕಾಟ ಮುಂದುವರಿಸಿದಾಗ ಮಧ್ಯಾಹ್ನದ ವೇಳೆಗೆ ನೇತ್ರಾವತಿ ಸ್ನಾನ ಘಟ್ಟದಿಂದ ಅನತಿ ದೂರದಲ್ಲಿ ಮುಖ್ಯ ರಸ್ತೆಯಿಂದ ಬಲ ತಿರುವು ಮೂಲಕ ಪಾಂಗಾಳಕ್ಕೆ ಹೋಗುವ ರಸ್ತೆ ಬದಿಯ ಕಾಡಿನಲ್ಲಿ ಶವ ಸಿಕ್ಕಿತು. ಮನೆಯಲ್ಲಿನ ಹೊಸ ಅಕ್ಕಿ ಊಟವನ್ನು ನೆನೆದುಕೊಂಡು ಹೊರಟಿದ್ದ ಬಾಲೆ ದುರುಳರ ಕಾಮಪಿಪಾಸೆಗೆ ಬಲಿಯಾಗಿದ್ದಳು.

ಈ ಘಟನೆಯಿಂದ ತಾಲೂಕು ಮಾತ್ರವಲ್ಲದೆ ಜಿಲ್ಲೆಯಾದ್ಯಂತದ ಸಜ್ಜನ ಮನಸ್ಸುಗಳು ಉರಿದೆದ್ದವು. ಜಾತಿ ಭೇದವಿಲ್ಲದೆ ಅಲ್ಲಲ್ಲಿ ಪ್ರತಿಭಟನೆಗಳು ನಡೆದವು. ಬಾಹಬಲಿ ಬೆಟ್ಟದ ಬಳಿ ಅನುಮಾನಾಸ್ಪದವಾಗಿ ಇದ್ದ ಒಬ್ಬನನ್ನು ಊರವರೇ ಹಿಡಿದು ಪೋಲಿಸರಿಗೆ ಒಪ್ಪಿಸಿದರು. ಬಂಧಿತ ಕಾರ್ಕಳದ ಸಂತೋಷ್ ಎಂಬಾತನೇ ಆರೋಪಿ ಎಂದು ಪೋಲಿಸರು ನಿರ್ಧರಿಸಿ ಕೈತೊಳೆದುಕೊಳ್ಳಲು ಅಂದಿನಿಂದಲೇ ಸನ್ನದ್ಧರಾದರು. ಆನಂತರ ತನಿಖೆ ಹಳ್ಳ ಹಿಡಿಯುತ್ತಾ ಹೋಯಿತು.

ಕಾಲೇಜಿನ ಸಮವಸ್ತ್ರದಲ್ಲಿಯೇ ಈಕೆಯನ್ನು ಕರೆದೊಯ್ದು ಬಲಾತ್ಕಾರ ಮಾಡಿ ಬಟ್ಟೆಬರೆಗಳನ್ನು ಹರಿದು ಹಾಕಲಾಗಿತ್ತು. ಕೈಗಳನ್ನು ಚೂಡಿದಾರದ ಶಾಲಿನಿಂದ ಗಿಡವೊಂದಕ್ಕೆ ಕಟ್ಟಿಹಾಕಲಾಗಿತ್ತು. ಬಳಿಕ ಅತ್ಯಾಚಾರ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಈ ಸಂದರ್ಭ ಬಾಲೆ ಪ್ರತಿ ಹೋರಾಟವನ್ನು ನಡೆಸಿದ್ದಾಳೆ ಎಂದು ಅಲ್ಲಿನ ದೃಶ್ಯ ಸಾರಿಸಾರಿ ಹೇಳುವ ಕುರುಹುಗಳಿದ್ದವು. ಶವ ಇದ್ದ ಸ್ಥಳದಲ್ಲಿ ದೂರವಾಣಿ ಸಂಖ್ಯೆಗಳಿರುವ ಚೀಟಿ ಪೋಲಿಸರಿಗೆ ಸಿಕ್ಕಿದೆ ಅದನ್ನು ನಾಶಮಾಡಿದ್ದಾರೆ ಎಂದು ಜನ ಆರೋಪಿಸುತ್ತಿದ್ದಾರೆ.

ಅಲ್ಲದೆ ಬಳಿಕ ನಡೆದ ತನಿಖೆ ಸಂದರ್ಭ ಪೋಲಿಸರು ಸೌಜ್ಯನ್ಯಾಳ ಮನೆಯಿಂದಲೇ ಆಕೆಯ ಒಳ ಉಡುಪನ್ನು ಸ್ಥಳದಲ್ಲಿ ತಂದಿರಿಸಿದ್ದಾರೆಂದೂ ಆರೋಪಗಳಿವೆ. ಒಟ್ಟಾರೆ ಸೌಜನ್ಯಾಳ ಮೇಲೆ ಆದ ಅತ್ಯಾಚಾರ ಬಳಿಕ ಅದರಿಂದಾದ ಆದ ಸಾವನ್ನು ಗಮನಿಸಿದರೆ ಇದು ಒಬ್ಬನಿಂದ ಆದ ಕೃತ್ಯ ಅಲ್ಲವೇ ಅಲ್ಲ ಎಂದು ಸಾರ್ವಜನಿಕರು ಬಲವಾಗಿ ನಂಬಿದ್ದಾರೆ. ಈ ಕೃತ್ಯದ ಹಿಂದೆ ಇನ್ನೂ ಕೆಲವರಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆಯೇ ಆಗಬೇಕು ಎಂದು ತಾಲೂಕು ಜಿಲ್ಲೆಯ ನಾಗರಿಕರ ಮನದಲ್ಲಿದೆ. ಹಲವಾರು ಸಂಘಟನೆಗಳು, ಪಕ್ಷಗಳು ಆರಂಭದಲ್ಲಿ ಬಲವಾದ ಪ್ರತಿಭಟನೆಗಳನ್ನು ನಡೆಸಿವೆ. ಅದರಲ್ಲಿ ಎಡಪಂಥೀಯ ಸಂಘಟನೆಗಳು ಈ ಬಗ್ಗೆ ಸತತ ಹೋರಾಟವನ್ನು ಇಂದಿಗೂ ನಡೆಸುತ್ತಾ ಇವೆ.

ಆರಂಭದಿಂದಲೇ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಎಲ್ಲರೂ ಆಗ್ರಹಿಸಿದ್ದರು. ಆದರೆ ಅಂದಿನ ಸರಕಾರ ಕಿವಿಗೊಡಲಿಲ್ಲ. ಬದಲಾಗಿ ಸಿಐಡಿಗೆ ಒಪ್ಪಿಸಿತು. ಅವರೂ ಪೂರ್ಣ ತನಿಖೆ ಮಾಡಲಿಲ್ಲ. ತನಿಖಾಧಿಕಾರಿಗಳು ಬೇರೆ ಬೇರೆ ಬಂದರೂ ಪ್ರಯೋಜನವಾಗಿಲ್ಲ. ಜಿಲ್ಲಾ ನ್ಯಾಯಾಲಯದಲ್ಲಿ ಇನ್ನೂ ಪೂರ್ಣ ಪ್ರಮಾಣದ ತನಿಖಾ ವರದಿ ಸಲ್ಲಿಕೆಯೇ ಆಗಲಿಲ್ಲ.

ಇದೆಲ್ಲವನ್ನು ನೋಡಿದರೆ ಬಂಧಿತ ಆರೋಪಿಯೂ ಬಿಡುಗಡೆಯಾಗುವುದರಲ್ಲಿ ಸಂಶಯವಿಲ್ಲ. ಶಾಸಕ ವಸಂತ ಬಂಗೇರ ಸೌಜನ್ಯಾ ಸಾವಿನ ಬಗ್ಗೆ ವಿಧಾನಸಭೆಯಲ್ಲಿ ಪ್ರಬಲವಾದ ಧ್ವನಿ ಎತ್ತಿ ಪ್ರಕರಣದ ತನಿಖೆಗೆ ಚುರುಕು ಮುಟ್ಟಿಸುವ ಕಾರ್ಯ ಮಾಡಿದ್ದಾರೆ.

ದಿಲ್ಲಿ ಮೊದಲಾದೆಡೆಗಳಲ್ಲಿನ ಇಂಥದ್ದೇ ಪ್ರಕರಣಗಳು ಶೀಘ್ರ ಇತ್ಯರ್ಥವಾಗುತ್ತಿರಬೇಕಾದರೆ ಸೌಜನ್ಯಾಳ ಸಾವು ನ್ಯಾಯವೇ ಎಂಬ ಪ್ರಶ್ನೆ ಇದೆ.

ಹಳ್ಳಿಗೊಂದು ಕಾನೂನು ದಿಲ್ಲಿಗೊಂದು ಕಾನೂನು ಯಾಕೆ? ಈ ಪ್ರಕರಣವನ್ನು ಸಿಬಿಐಗೆ ವಹಿಸಿಕೊಡದೇ ಇರುವುದು ಯಾಕೆ? ಪ್ರಕರಣದ ಪೂರ್ಣ ಮಾಹಿತಿಯನ್ನು ಸರಕಾರ ಯಾಕೆ ಕೊಡುತ್ತಿಲ್ಲ? ಸಾರ್ವಜನಿಕರ ಅನುಮಾನಗಳನ್ನು ಸರಕಾರ ಯಾಕೆ ಪರಿಹರಿಸುತ್ತಿಲ್ಲ? ಪೋಲಿಸರು ದಿಟ್ಟ ತನಿಖೆಗೆ ಯಾಕೆ ಹಿಂದೇಟು ಹಾಕುತ್ತಿದ್ದಾರೆ? ಎಂಬಿತ್ಯಾದಿ ಪ್ರಶ್ನೆಗಳು ತಾಲೂಕಿನ ಜನತೆಯನ್ನು ನ್ಯಾಯ ಸಿಗುವವರೆಗೆ ಕಾಡುತ್ತಲೇ ಇರಲಿದೆ.

No comments:

Post a Comment