Wednesday 16 October 2013

ಸೌಜನ್ಯ ಹತ್ಯೆ: ಪ್ರತಿ ಕುಟುಂಬದ ಸ್ಥಿತಿಯೂ ಮುಂದೆ ಭಿನ್ನವಾಗಿರಲಾರದು.




- ಶೌರೀಶ್ ಕುದ್ಕುಳಿ
ಪ್ರಜ್ಞಾಪೂರ್ವಕವಾಗಿ ಎಸಗಿದಂತಹ ಒಂದು ಮೃಗೀಯ ಕಾರ್ಯವನ್ನು ಮರೆಮಾಚುವ ಕೆಲಸ ಇಂದು ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಒಂದು ವರ್ಷದ ಹಿಂದೆ ಸೌಜನ್ಯ ಎಂಬ ಅಮಾಯಕ ಹೆಣ್ಣು ಮಗಳ ದಾರುಣ ಹತ್ಯೆಯಾಯಿತು. ಕೆಲವು ಕಾಮುಕರು ಆಕೆಯನ್ನು ಮೃಗೀಯ ರೀತಿಯಲ್ಲಿ ಬಳಸಿಕೊಂಡು, ಕೊಂದು ಹಾಕಿದರು. ಆ ಹೊತ್ತಲ್ಲಿ, ದೇಹದಲ್ಲಿ ಜೀವಾತ್ಮವಿದ್ದ ಪ್ರತಿ ಮಾನವನೂ ಯಾವ ರೀತಿ ಪ್ರಾಣ ಮತ್ತು ಮಾನ ಉಳಿಸಿಕೊಳ್ಳಲು ಒದ್ದಾಡುತ್ತಾನೆಯೋ, ಅದೇ ರೀತಿ ಆಕೆಯೂ ತನ್ನ ಪ್ರಾಣರಕ್ಷಣೆಗೆ ವಿಲವಿಲ ಒದ್ದಾಡಿದ ಕುರುಹುಗಳು ನಿಖರವಾಗಿ ಕಾಣಿಸಿವೆ. ತನ್ನ ಅರಿವಿಗೆ ಸಾವಿನ ಕೊನೆಗಳಿಗೆ ಕಾಣಿಸುತ್ತಿದ್ದು, ಅದನ್ನು ಇನ್ನಾರೋ ಬಲಾತ್ಕಾರವಾಗಿ ಹೇರುತ್ತಿರುವಾಗ, ಅದರಿಂದ ಬಿಡುಗಡೆ ಪಡೆಯುವ ಹೊತ್ತಿನಲ್ಲಿ ನಡೆಸುವ ಫಲಕಾರಿಯಲ್ಲದ ಹೋರಾಟ ಮತ್ತು ಆ ವೇದನೆ ಊಹಿಸಿಕೊಂಡರೆ ಎದೆ ನಡುಗುವಂತಹುದು.
ಧರ್ಮವೇ ನೆಲೆನಿಂತ ಬೀಡಾದ ತುಳುನಾಡು ಮತ್ತು ಕರ್ನಾಟಕದಾದ್ಯಂತ ಮನೆಮಾತಾದ ಶ್ರೀ ಮಂಜುನಾಥನಿರುವ ಧರ್ಮಸ್ಥಳದಲ್ಲಿ ಕಾಮುಕರು ಆಕೆಯನ್ನು ಎಳೆದೊಯ್ದು ಅತ್ಯಾಚಾರ ನಡೆಸಿದರು. ಮನೆಗೆ ತೆರಳುವ ಹಾದಿ ಬದಿಯಲ್ಲಿ, ಸಂಜೆ ಸುಮಾರು 5 ಗಂಟೆ ಹೊತ್ತಿಗೆ ನಡೆದ ಈ ಘಟನೆಯ ಸ್ಥಳ ಆ ಸಂದರ್ಭದ ಭೀಕರತೆಯ ಕರಾಳತೆಗೆ ಸಾಕ್ಷಿ. ಮಾನರಕ್ಷಣೆ ಮತ್ತು ಜೀವರಕ್ಷಣೆಗಾಗಿ ಆಕೆ ಒದ್ದಾಡಿರಬಹುದಾದ ಪರಿ, ಆಕೆಯ ಶವ ಬಿದ್ದಿದ್ದ ಜಾಗದಲ್ಲಿರುವ ಕುರುಹುಗಳು ಎಂತಹವರನ್ನೂ ಬೆಚ್ಚಿ ಬೀಳಿಸುವಂತಹದ್ದು. ಕೈ ಕಾಲುಗಳನ್ನು ಮರಕ್ಕೆ ಕಟ್ಟಿ ಹಾಕಿದ ಭೀಭತ್ಸ ಚಿತ್ರ ಹಾಗೆಯೇ ಇತ್ತು. ಕಾಲೇಜಿನ ಗುರುತುಪತ್ರದ ದಾರವೇ ಕತ್ತು ಹಿಸುಕಿ ಕೊಲೆ ಮಾಡಲು ಬಳಸಿದ ಹಗ್ಗವಾಗಿತ್ತು.
ಈ ಘಟನೆಗೆ ಹಲವು ಸಂಘಟನೆಗಳು ಅದರಲ್ಲೂ ವಿದ್ಯಾರ್ಥಿ ಸಂಘಟನೆಗಳು ಮೌನವಾಗಿ ಕಣ್ಣೀರು ಸುರಿಸಿದವು. ಬೀದಿಗಿಳಿದು ಪ್ರತಿಭಟನೆ ಮಾಡಿದವು. ಆದರೆ ಸಾರ್ವಜನಿಕ ಸ್ಮರಣೆ ಅಥವಾ ನೆನಪು ಕ್ಷಣಕಾಲ ಎನ್ನುವಂತೆ, ಸಾರ್ವಜನಿಕರ ರೋಷದ ಬೆಂಕಿ ಇಂದು ತಣ್ಣಗಾಗುತ್ತಿದೆ. ಕಟುಕರು ಬೀದಿಯಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ.
ಇವುಗಳ ಅರಿವಿರುವ ಜನತೆ ನ್ಯಾಯಾಲಯ, ಪೋಲಿಸ್ ವ್ಯವಸ್ಥೆ ಮತ್ತು ಅಂತಿಮವಾಗಿ ಸರಕಾರದ ಮೇಲೆ ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಮಹಿಳಾ ಸಂಘಟನೆಗಳು ಮೂಕ ವೇದನವನ್ನು ಅನುಭವಿಸುತ್ತಿವೆಯೋ ಎನ್ನುವಂತೆ ಭಾಸವಾಗುತ್ತಿದೆ! ಮಂಗಳೂರಿನ ಪಬ್ ದಾಳಿಗೊಳಗಾದ ಹೆಣ್ಣು ಮಕ್ಕಳಿಗೆ ದೊರಕಿದ್ದ ಬೆಂಬಲ ಮೈಸೂರಿನಲ್ಲಿ ರೈಲಿನಿಂದ ತಳ್ಳಲ್ಪಟ್ಟ ಹೆಣ್ಣು ಮಗಳಿಗೆ ದೊರಕಿಲ್ಲ! ಹಾಗೆಯೇ ಧರ್ಮಸ್ಥಳದ ಸೌಜನ್ಯಳ ಅಮಾನುಷ ಕೊಲೆಯ ಖಂಡಿಸಿ ಹೋರಾಟ ಮಾಡಿದವರ ವಿರುದ್ಧ ಕೇಸ್ ದಾಖಲು ಮಾಡಿಕೊಂಡ ಉಡುಗೋರೆ ಮಾತ್ರವೇ ಬೆಳ್ತಂಗಡಿಯ ನಾಗರಿಕರಿಗೆ ದೊರಕಿತು!
ನಮ್ಮ ವ್ಯವಸ್ಥೆ ಹೇಗಿದೆ ಮತ್ತು ಎತ್ತ ಸಾಗುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. ಪ್ರತಿ ವ್ಯಕ್ತಿ ಯಾ ಸಂಘಟನೆಗೆ ಇಂದು ಸಾರ್ವಜನಿಕವಾಗಿ ಅಜೆಂಡಾ ಬೇಕಾಗಿದೆ. ಕೆಲವೊಮ್ಮೆ ಇವರು ರಾಜಕೀಯ ಪಕ್ಷಗಳ ಮುಖವಾಣಿಯಂತೆ ವರ್ತಿಸುತ್ತವೆ. ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳ ಸಾರ್ವಜನಿಕ ಸಂಸ್ಥೆಗಳು ವಿಷಯಾಧಾರಿತ ಚಳುವಳಿಗಳನ್ನು ಮಾಡುತ್ತವೆ. ಇಡೀ ಮನುಕುಲದ ಬುಡಕ್ಕೇ ಪೆಟ್ಟು ಬಿದ್ದಾಗಲೂ, ಸಾರ್ವಜನಿಕರು ಕ್ಷಣ ಕಾಲ ಮಾತ್ರ ವಿಚಲಿತರಾಗಿ ಖಂಡಿಸುತ್ತಾರೆ. ಆದರೆ ಅದರ ಮುಂದಿನ ಬೆಳವಣಿಗೆಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.
ಸೌಜನ್ಯ ಪ್ರಕರಣವೂ ಈ ರೀತಿಯಾಗಿ ಜನರಿಂದ ಮರೆಯಾಗುತ್ತಿರುವ ವೇದನೆಯ ಪ್ರಕರಣ. ಮರೆಯಾಗುವ ರೀತಿಯಲ್ಲಿ ಕೊಲೆಯ ವಿಚಾರಣೆಯ ಗತಿಯೂ ಸಾಗಿದೆ! ಆರೋಪ ಪ್ರತಿ ಆರೋಪಗಳು ನಡೆಯುತ್ತಿವೆ. ಸೌಜನ್ಯ ಹೆತ್ತವರಿಗೆ ಪ್ರಚಾರ ಬೇಕಿಲ್ಲ, ನ್ಯಾಯ ಬೇಕಿದೆ. ಮೂಲತ: ಕೃಷಿ ಕುಟುಂಬವಾಗಿರುವ ಇವರು ನ್ಯಾಯಪರತೆಯಿಂದ ಜೀವಿಸುತ್ತಿರುವವರು. ಆಂತರಿಕ ಕಥೆಗಳು ಧರ್ಮದ ನೆಲೆವೀಡಾದ ಧರ್ಮಸ್ಥಳದಲ್ಲಿ ಹರಿದಾಡುತ್ತಿದ್ದರೂ, ಪೋಲಿಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲುತ್ತಿದ್ದರೂ, ಕಳೆದು ಹೋದ ಸೌಜನ್ಯ ಬರಲಾರಳು ಎಂಬುದು ಅವರ ಅರಿವಿನಲ್ಲಿದೆ. ಸಮಾಜ ಸೂಕ್ತ ರೀತಿಯಲ್ಲಿ ಪ್ರತಿಸ್ಪಂದಿಸಿದ್ದೂ ಅವರ ಗಮನದಲ್ಲಿದೆ. ಆದರೆ ವಿಕೃತವಾಗಿ ಕೊಲೆಗೈದ ಪರಮ ಪಾಪಿಗಳು ಯಾರು ಎಂಬುದು ಎಲ್ಲರಿಗೂ ಗೊತ್ತಿದ್ದರೂ ನ್ಯಾಯ ಮರೀಚಿಕೆಯಾಗಿರುವುದು ಪ್ರತಿದಿನವನ್ನೂ ನರಕ ಮಾಡಿದೆ.
ಮೂರು ನಾಲ್ಕು ವ್ಯಕ್ತಿಗಳ ಕುಕೃತ್ಯ ಇದು ಎಂಬುದು ಅನೇಕರ ಅಭಿಮತ. ಮನೋರೋಗಿ ಈ ಕೃತ್ಯ ಮಾಡಿರಲಾರ ಎಂಬುದು ಸ್ಥಳೀಯರ ಅಭಿಪ್ರಾಯ. ಪೋಲಿಸ್ ಇಲಾಖೆಯ ಕಸ್ಟಡಿಯಲ್ಲಿ ಸದ್ಯಕ್ಕೆ ಇರುವ ವ್ಯಕ್ತಿ ಮನೋರೋಗಿ. ಜಗತ್ತಿನ ವ್ಯವಹಾರದಲ್ಲಿ ಹುಚ್ಚರಾಗಿರುವ ಪ್ರತಿ ಮಾನವನಿಗೆ ಸೌಜನ್ಯ ಪ್ರಕರಣ ಕ್ಷುಲಕವೆಂದೆನಿಸಬಹುದು. ಆದರೆ ಈ ಘಟನೆಯನ್ನು ನಗಣ್ಯ ಮಾಡಿದ್ದಲ್ಲಿ, ಪ್ರತಿ ಕುಟುಂಬದ ಸ್ಥಿತಿಯೂ ಮುಂದೆ ಭಿನ್ನವಾಗಿರಲಾರದು ಎಂಬ ಸಂದೇಶ ಸಮಾಜಕ್ಕಿದೆ.

No comments:

Post a Comment