Friday, 18 October 2013

ಧರ್ಮಸ್ಥಳದ ಸೌಜನ್ಯಾಗಾಗಿ ಒಂದಾದ ಜನತೆಸೌಜನ್ಯಾ ಕೊಲೆ: ಸಿಬಿಐ ತನಿಖೆಯಾಗಲಿ;ನ್ಯಾಯಕ್ಕಾಗಿ ಬೆಳ್ತಂಗಡಿಯಲ್ಲಿ ಉಪವಾಸ

ನ್ಯಾಯ ಸಿಗುವವರೆಗೂ ಹೋರಾಟ ,ಬೆದರಿಕೆಗೆ ಬಗ್ಗುವುದಿಲ್ಲ: ಕೇಮಾರು ಶ್ರೀ
ಬೆಳ್ತಂಗಡಿ, ಅ.18: ಬೆಳ್ತಂಗಡಿಯ ‘ನಿರ್ಭಯಾ’ ಎಂದೇ ಗುರುತಿಸಲ್ಪಟ್ಟ ಸೌಜನ್ಯಾಳ ಅತ್ಯಾಚಾರ, ಕಗ್ಗೊಲೆ ಪ್ರಕರಣ ಇದೀಗ ತೀವ್ರ ರೂಪವನ್ನು ಪಡೆದುಕೊಂಡಿದೆ. ಶುಕ್ರವಾರ ಬೆಳಗ್ಗೆ ಬೆಳ್ತಂಗಡಿಯಲ್ಲಿ ಸೇರಿದ ಸಹಸ್ರಾರು ಪ್ರತಿಭಟನಕಾರರು ದಿನವಿಡೀ ಉಪವಾಸ ಸತ್ಯಾಗ್ರಹದ ಮೂಲಕ ಸಿಬಿಐ ತನಿಖೆಗೆ ಒತ್ತಾಯಿಸಿದರು. ಮೃತಪಟ್ಟ ಸೌಜನ್ಯಾಳ ಹುಟ್ಟಿದ ದಿನವೂ ಇಂದೇ ಆಗಿದ್ದು, ವಿವಿಧ ರಾಜಕೀಯ ಮುಖಂಡರು, ಸ್ವಾಮೀಜಿಗಳು ಈ ಉಪವಾಸದಲ್ಲಿ ಭಾಗಿಯಾಗಿದ್ದಾರೆ. ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮ ರೆಡ್ಡಿ, ಈ ಹಿಂದೆ ಧರ್ಮಸ್ಥಳದಲ್ಲಿ ಪದ್ಮಲತಾರನ್ನು ಅತ್ಯಾಚಾರಗೈದು ಕೊಲೆಗೈಯಲಾಗಿತ್ತು. ಇದೀಗ ಸೌಜನ್ಯಾಳ ಅತ್ಯಾಚಾರ-ಕೊಲೆ ಯಾಗಿದೆ. ಇದು ಇಲ್ಲಿಗೇ ನಿಲ್ಲಬೇಕು. ಅದಕ್ಕಾಗಿ ಈ ಹೋರಾಟ. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿ ನ್ಯಾಯ ಸಿಗುವವರೆಗೂ ಈ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದರು.

ಈ ಹೋರಾಟ ಯಾವುದೇ ಧರ್ಮ ಅಥವಾ ವ್ಯಕ್ತಿಯ ವಿರುದ್ಧವಲ್ಲ. ಇದು ವ್ಯವಸ್ಥೆಯ ವಿರುದ್ಧದ ಹೋರಾಟವಾಗಿದೆ.ಸೌಜನ್ಯಾ ಪ್ರಕರಣದ ತನಿಖೆ ನಡೆಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಪೊಲೀಸರು ಕೊಲೆಗಾರರನ್ನು ಬಂಧಿಸುವ ಬದಲು ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವವರನ್ನು ದಮನಿಸಲು ಹೊರಟಿದ್ದಾರೆ. ನೊಂದವರ ಪರವಾಗಿ ನಿಲ್ಲಬೇಕಾಗಿದ್ದ ಸರಕಾರ ಇದೀಗ ಶೋಷಕರ ಪರ ನಿಂತಿದೆ.

ಸಚಿವರಾದ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲರು, ಮಾಜಿ ಸಚಿವ ಜನಾರ್ದನ ಪೂಜಾರಿ ನ್ಯಾಯ ಕೇಳುವವರ ವಿರುದ್ಧ ಕ್ರಮ ಕೈಗೊಳ್ಳುವ ಬೆದರಿಕೆಯೊಡ್ಡುತ್ತಿದ್ದಾರೆ. ಸೌಜನ್ಯಾಳ ಕೊಲೆಯಾದಾಗ ಕ್ರಮ ಕೈಗೊಳ್ಳಲು ಇವರೇಕೆ ಮುಂದಾಗಲಿಲ್ಲ ಎಂದು ಶ್ರೀರಾಮ ರೆಡ್ಡಿ ಪ್ರಶ್ನಿಸಿದರು.ಧರ್ಮದ ಮುಖವಾಡ ಹಾಕಿಕೊಂಡವರು ಧರ್ಮವನ್ನು ಕೆಡಿಸುವ ಕಾರ್ಯ ಮಾಡುತ್ತಿದ್ದಾರೆ.

ಇಂಥವರ ವಿರುದ್ಧ ಜನ ಎಚ್ಚರಗೊಳ್ಳಬೇಕಾದ ಅಗತ್ಯವಿದೆ ಎಂದ ಅವರು, ಸೌಜನ್ಯಾ ಪ್ರಕರಣದಲ್ಲಿ ಧ್ವನಿ ಎತ್ತಿದವರ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಬಿಜೆಪಿಗರು ಒಂದಾಗಿದ್ದರು. ಅವರಿಗೆ ಸೌಜನ್ಯಾಳ ನೋವಿಗಿಂತಲೂ ದೊಡ್ಡವರಿಗಾಗಿರುವ ಅಪಮಾನವೇ ಮುಖ್ಯ ವಿಷಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನ್ಯಾಯದ ವಿರುದ್ಧ ಮಹಿಳೆಯರು ಧ್ವನಿಯೆತ್ತಲಿ: ಕೇಮಾರು ಶ್ರೀ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಕೇಮಾರು ಈಶ ವಿಠ್ಠಲದಾಸ ಸ್ವಾಮೀಜಿ, ಸೌಜನ್ಯಾಳಿಗೆ ನ್ಯಾಯ ಕೊಡಿಸಲು ಜಾತಿ, ಧರ್ಮ, ಪಕ್ಷ, ಭೇದ ಮರೆತು ಎಲ್ಲರೂ ಒಂದಾಗಿ ನ್ಯಾಯಕ್ಕಾಗಿ ಹೋರಾಡಬೇಕಾಗಿದೆ. ತಮ್ಮ ಮಗಳಿಗಾದ ಅನ್ಯಾಯ ಎಂದು ಭಾವಿಸಿ ಮಹಿಳೆಯರೆಲ್ಲರೂ ಧ್ವನಿಯೆತ್ತುವಂತಾಗಬೇಕು. ಇದು ಯಾವುದೇ ಧಾರ್ಮಿಕ ಕೇಂದ್ರ ಅಥವಾ ವ್ಯಕ್ತಿಯ ವಿರುದ್ಧದ ಹೋರಾಟವಲ್ಲ. ಸೌಜನ್ಯಾಳ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂಬ ಗುರಿಯೊಂದಿಗೆ ಹೋರಾಟ. ಇದರಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು. ತನಿಖೆಯ ದಾರಿ ತಪ್ಪಿಸುವವರು ಯಾರು ಎಂದು ಅನ್ಯಾಯಕ್ಕೊಳಗಾದ ಸೌಜನ್ಯಾಳ ಮನೆಯವರು ಹೇಳಲಿ.

ಸೌಜನ್ಯಾಳ ಪರ ಮಾತನಾಡಿದರೆ ಖಾವಿ ಬಿಚ್ಚಿಸುವ ಹಾಗೂ ದೌರ್ಜನ್ಯ ನಡೆಸುವ ಮಾತನ್ನಾಡಿದ್ದಾರೆ. ಆದರೆ ಯಾವುದೇ ಬೆದರಿಕೆಯಿಂದಲೂ ಈ ಹೋರಾಟ ನಿಲ್ಲುವುದಿಲ್ಲ ಎಂದು ಕೇಮಾರು ಶ್ರೀ ಸ್ಪಷ್ಟಪಡಿಸಿದರು.ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಜಿಲ್ಲೆಯ ಜನ ನಾಯಕರೆನಿಸಿಕೊಂಡವರೆಲ್ಲ ನ್ಯಾಯದ ಪರ ನಿಲ್ಲದೆ ಯಾರದೋ ಬೆಂಬಲಕ್ಕೆ ಮುಂದಾಗುತ್ತಿದ್ದಾರೆ. ಜನತೆಯ ಮನಸ್ಸಿನಲ್ಲೇನಿದೆ ಎಂಬುದನ್ನು ಅರಿತು ಈ ನಾಯಕರು ವರ್ತಿಸಲಿ. ಸಚಿವ ವಿನಯ ಕುಮಾರ್ ಸೊರಕೆ ಬಹಿರಂಗವಾಗಿಯೇ ಸರಕಾರ ಯಾರ ಪರ ಇದೆ ಎಂದು ಹೇಳಿಕೊಂಡಿದ್ದಾರೆ. ಸಮಾಜವಾದಿ ನಾಯಕ ಸಿದ್ದರಾಮಯ್ಯ ಈಗಲಾದರೂ ಎಚ್ಚೆತ್ತುಕೊಳ್ಳಲಿ ಎಂದರು.

ಜನಪರ ಹೋರಾಟಗಾರ್ತಿ ಅಮೃತಾ ಶೆಟ್ಟಿ ಆತ್ರಾಡಿ ಮಾತನಾಡಿ, ಯಾವುದೇ ಕಾರಣಕ್ಕೂ ಇಂತಹ ದೌರ್ಜನ್ಯವನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ಇಂತಹ ಕ್ರೌರ್ಯವನ್ನು ಮೆರೆದವರು ಯಾರೇ ಆಗಲಿ, ಅವರನ್ನು ಕಾನೂನಿನ ಮುಂದೆ ತಂದು ತಕ್ಕ ಶಿಕ್ಷೆ ಕೊಡಿಸಬೇಕಾಗಿದೆ. ಅದಕ್ಕಾಗಿ ಸಂಘಟಿತ ಹೋರಾಟ ಅಗತ್ಯವಿದೆ ಎಂದು ಹೇಳಿದರು.

ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್‌ವಾದ) ಜಿಲ್ಲಾ ಸಂಚಾಲಕ ಚಂದು ಎಲ್., ದಸಂಸ(ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಂಚಾಲಕ ರಘು ಜಿ.ಎಕ್ಕಾರ್, ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಾನಂದ ಡಿ., ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ದಯಾನಂದ ಶೆಟ್ಟಿ, ಡಿವೈಎಫ್‌ಐ ಮಂಗಳೂರು ನಗರಾಧ್ಯಕ್ಷ ಇಮ್ತಿಯಾಝ್, ‘ಜೈಕನ್ನಡಮ್ಮ’ ಸಂಪಾದಕ ದೇವಿಪ್ರಸಾದ್, ಎಸ್‌ಎಫ್‌ಐ ಮುಖಂಡ ನಿತಿನ್ ಕುಮಾರ್, ಸಿಪಿಎಂ ತಾಲೂಕು ಕಾರ್ಯದರ್ಶಿ ಶಿವಕುಮಾರ್, ಬಿ.ಎಂ.ಭಟ್, ಹರಿದಾಸ್ ಮಾತನಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಪ್ರತಿಭಟನೆಯಲ್ಲಿ ಸೌಜನ್ಯಾಳ ತಂದೆ ಚಂದಪ್ಪ ಗೌಡ, ತಾಯಿ ಕುಸುಮಾವತಿ, ವಿಠ್ಠಲ ಗೌಡ ಹಾಗೂ ಮನೆಯವರು ಉಪಸ್ಥಿತರಿದ್ದರು. ವಿವಿಧ ಸಂಘಟನೆಗಳ ಮುಖಂಡರಾದ ಜೀವನ್‌ರಾಜ್ ಕುತ್ಯಾರ್, ನ್ಯಾಯವಾದಿ ವಸಂತ ಮರಕಡ, ವೆಂಕಪ್ಪಕೋಟ್ಯಾನ್ ಇಂದಬೆಟ್ಟು, ಡಾ.ಹರಳೆ, ದಿನೇಶ್ ಗೌಡ ಮಲವಂತಿಗೆ, ಬಿ.ಕೆ. ವಸಂತ್, ದಾಮೋದರ ಭಟ್, ಸಂಜೀವ ಆರ್., ಜನಾರ್ದನ ಬಂಗೇರ, ಸಂತೋಷ್ ಮಜಲು, ಲಕ್ಷ್ಮಣ ಗೌಡ ಪಾಂಗಳ, ಶೈಲೇಶ್ ಆರ್.ಜೆ., ರವಿರಾಜ್, ಶೇಖರ್ ಎಲ್., ನೀಲೇಶ್, ಕಿರಣಪ್ರಭಾ, ಮಧುಸೂದನ್, ಪ್ರಶಾಂತ್, ಸುಕನ್ಯಾ, ಪುಷ್ಪರಾಜ್ ಮೊದಲಾದವರು ಪಾಲ್ಗೊಂಡಿದ್ದರು.

No comments:

Post a Comment